ಕೊಲಂಬಿಯ

ದಕ್ಷಿಣ ಅಮೆರಿಕದ ವಾಯವ್ಯದಲ್ಲಿರುವ ಒಂದು ಗಣರಾಜ್ಯ. ಉತ್ತರದಲ್ಲಿ ಕ್ಯಾರಿಬೀಯನ್ ಸಮುದ್ರ ಮತ್ತು ವೆನಿಜ್ವಿóೀಲ, ಪೂರ್ವದಲ್ಲಿ ವೆನಿಜ್ವೀóಲ ಮತ್ತು ಬ್ರಜಿóಲ್, ದಕ್ಷಿಣದಲ್ಲಿ ಬ್ರೇಜಿóಲ್, ಪೆರು ಮತ್ತು ಎಕ್ವಡಾರ್, ಪಶ್ಚಿಮದಲ್ಲಿ ಎಕ್ವಡಾರ್, ಪೆಸಿಫಿಕ್ ಸಾಗರ, ಪನಾಮಾ ಮತ್ತು ಕ್ಯಾರಿಬೀಯನ್ ಸಮುದ್ರ ಇವೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ತೀರಗಳು ಇರುವಂಥ ದೇಶ ದಕ್ಷಿಣ ಅಮೆರಿಕ ಖಂಡದಲ್ಲಿ ಇದೊಂದೇ. ಇದನ್ನು ದಕ್ಷಿಣ ಅಮೆರಿಕದ ಹೆಬ್ಬಾಗಿಲು ಎಂದು ಕರೆಯಲಾಗಿದೆ. ಈ ರಾಜ್ಯದ ಗರಿಷ್ಠ ಉದ್ದ ಉತ್ತರದಿಂದ ದಕ್ಷಿಣಕ್ಕೆ 1,050 ಮೈ. ಗರಿಷ್ಠ ಅಗಲ 860 ಮೈ. ವಿಸ್ತೀರ್ಣ 4,39,512 ಚ.ಮೈ. ಜನಸಂಖ್ಯೆ 2,07,00,000(1968ರ ಅಂದಾಜು). ರಾಜಧಾನಿ ಬೋಗೊಟಾ. 

ಭೌತಲಕ್ಷಣಗಳು : ಆಂಡೀಸ್ ಪರ್ವತಗಳ ಉತ್ತರಕೊನೆ ಇರುವುದು ಕೊಲಂಬಿಯದಲ್ಲಿ. ಅಲ್ಲಿ ಇವು ಮೂರು ಮುಖ್ಯ ಕವಲುಗಳಾಗಿ ಒಡೆಯುತ್ತವೆ. ಇವುಗಳಲ್ಲಿ ಮಧ್ಯದ ಕವಲು ಅತ್ಯುನ್ನತವಾದ್ದು. ಇದಕ್ಕೂ ಪಶ್ಚಿಮದ ಕವಲಿಗೂ ನಡುವೆ ಕಾಕ ನದೀ ಕಣಿವೆ ಇದೆ. ಮಧ್ಯದ ಮತ್ತು ಪೂರ್ವದ ಕವಲುಗಳ ನಡುವೆ ಮ್ಯಾಗ್ಡಲೀನ ನದೀ ಕಣಿವೆಯಿದೆ. 18,000' ಗೂ ಎತ್ತರವಾಗಿರುವ ಹಲವು ಶಿಖರಗಳು ಮಧ್ಯದ ಶ್ರೇಣಿಯಲ್ಲುಂಟು. ಇವುಗಳ ಪೈಕಿ ಟಾಲಿಮ (18,425'), ನೆವಾಡೊ ಡೆಲ್ ಹುಯಿಯ (18,701') ಮತ್ತು ನೆವಾಡೊ ಡೆಲ್ ರೂಯಿeóï (18,340') ಅಗ್ನಿಪರ್ವತಗಳು. ಪಶ್ಚಿಮದ ಪರ್ವತಶ್ರೇಣಿ ಪೆಸಿಫಿಕ್ ತೀರಕ್ಕೆ ಸಮಾನಾಂತರವಾಗಿ ಸಾಗಿ, ಮೂರು ತಗ್ಗಿನ ಕವಲುಗಳಾಗಿ ಒಡೆದು, ಕ್ಯಾರಿಬೀಯನ್ ಕಡಲತೀರದ ಬಯಲಿನಲ್ಲಿ ಕಣ್ಮರೆಯಾಗುತ್ತದೆ. ಈ ಶ್ರೇಣಿ ದಟ್ಟವಾದ ಕಾಡುಗಳಿಂದ ಕೂಡಿದ್ದು ಪೆಸಿಫಿಕ್ ಸಾಗರದ ಕಡೆಯ ಮಗ್ಗಲು ತುಂಬ ಕಡಿದು, ತೇವಪೂರಿತ. ಇದರ ಅತ್ಯುನ್ನತ ಶಿಖರ ನೆವಾಡೊ ಡೆ ಕಂಬಾಲ್(16,043'). ಪೂರ್ವದ ಶ್ರೇಣಿ ಉತ್ತರ ಮತ್ತು ಪಶ್ಚಿಮ ಕೊಲಂಬಿಯದ ಪರ್ವತ ಜಿಲ್ಲೆಯನ್ನು ಒಳನಾಡಿನ ತಗ್ಗಿನ ಬಯಲಿನಿಂದ ಬೇರ್ಪಡಿಸುತ್ತದೆ. ಈ ಮೈದಾನ ಕೊಲಂಬಿಯದ ಅರ್ಧಕ್ಕಿಂತ ಹೆಚ್ಚು ವಿಸ್ತಾರವಾದ್ದು. ಇದರ ದಕ್ಷಿಣಕ್ಕಿರುವ ಪ್ರದೇಶ ದುರ್ಗಮವಾದ ಕಾಡುಗಳಿಂದ ಆವೃತವಾಗಿದೆ. ಇದರಲ್ಲಿ ಎಷ್ಟೋ ಭಾಗವನ್ನು ಇದುವರೆಗೂ ಪರಿಶೋಧಿಸಿಲ್ಲ. 
ಕೊಲಂಬಿಯವನ್ನು ಸ್ಥೂಲವಾಗಿ ನಾಲ್ಕು ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ. 1 ಕ್ಯಾರಿಬೀಯನ್ ಕರಾವಳಿಯ ಪ್ರದೇಶ ತಗ್ಗಿನ ಬೆಟ್ಟಗಳಿಂದಲೂ ನದೀ ಮುಖಗಳಿಂದಲೂ ಕೂಡಿ ಈಗಲೂ ಹಿಂದುಳಿದಿದೆ. ಈ ಪ್ರದೇಶದ ನದಿಗಳು ವಿಸ್ತಾರವಾಗಿ ಹರಡಿ ಸುತ್ತಣ ನೆಲವನ್ನೆಲ್ಲ ಜವುಗಾಗಿ ಪರಿವರ್ತಿಸಿವೆ. ಈ ವಿಭಾಗದ್ದು ಹೆಚ್ಚು ಉಷ್ಣತೆಯ ವಾಯುಗುಣ. ಮಳೆ ಕಡಿಮೆ. ಪೂರ್ವಕ್ಕೆ ಹೋದಂತೆಲ್ಲ ಶುಷ್ಕತೆ ಅಧಿಕವಾಗುತ್ತದೆ. ಈ ಪ್ರದೇಶದ ವಾರ್ಷಿಕ ಮಳೆಯ ಅಂತರ 45"-10" ಒಳನಾಡಿಗೆ ಸಾಗಿದಂತೆ ಮಳೆ ಹೆಚ್ಚುತ್ತದೆ. 2 ಪಶ್ಚಿಮ ಪರ್ವತ ಶ್ರೇಣಿಗೂ ಪೆಸಿಫಿಕ್ ಸಾಗರಕ್ಕೂ ನಡುವೆ ಇರುವ ಪ್ರದೇಶ ಬಲು ಕಿರಿದು. ಇಲ್ಲಿ 200" ಗೂ ಹೆಚ್ಚು ಮಳೆಯಾಗುತ್ತದೆ. ನಿತ್ಯ ಹಸಿರುಕಾಡುಗಳಿಂದ ತುಂಬಿದ ಈ ಪ್ರದೇಶದ ನೆಲ ಸಾಗುವಳಿಗೆ ಹೆಚ್ಚು ಅನುಕೂಲವಾಗಿಲ್ಲ. 3 ಪೂರ್ವದ ಮೈದಾನ ಇಡೀ ಕೊಲಂಬಿಯದ ಮೂರನೆಯ ಎರಡು ಭಾಗದಷ್ಟಿದೆಯಾದರೂ ದೇಶದ ಜನಸಂಖ್ಯೆಯ 2% ಜನ ಮಾತ್ರ ಇಲ್ಲಿ ವಾಸಿಸುತ್ತಾರೆ. ಇದು ಪರ್ವತಗಳಿಂದ ಪ್ರತ್ಯೇಕಗೊಂಡಿರುವುದರಿಂದ ಇದರೊಂದಿಗೆ ಜನಸಂಪರ್ಕ ಏರ್ಪಡಲಿಲ್ಲ. ಮಲೇರಿಯಾ ವ್ಯಾಪಕವಾಗಿತ್ತು. 4 ಆಂಡಿಯನ್ ಪ್ರದೇಶ ಕೊಲಂಬಿಯದಲ್ಲಿ ನಿಸರ್ಗ ಸಂಪದ್ಯುಕ್ತವಾದ್ದು. ಇದರಲ್ಲಿ ಹಲವು ಉಪವಿಭಾಗಗಳಿವೆ. 

ನದಿಗಳು : ಕೊಲಂಬಿಯದ ನದಿಗಳಲ್ಲಿ ಪೆಸಿಫಿಕ್ ಸಾಗರವನ್ನು ಸೇರುವುವು ಒಂದು ವರ್ಗ. ಕ್ಯಾರಿಬೀಯನ್ ಸಮುದ್ರ ಸೇರುವುವು ಇನ್ನೊಂದು ವರ್ಗ. ಉಳಿದವು ಓರಿನೋಕೋ ಮತ್ತು ಅಮೆಜಾóನ್ ನದಿಗಳನ್ನು ಸೇರಿ ಅಟ್ಲಾಂಟಿಕ್ ಸಾಗರವನ್ನು ತಲುಪುತ್ತವೆ. ಮ್ಯಾಗ್ಡಲೀನವೂ ಅದರ ಉಪನದಿಯಾದ ಕಾಕವು ಕೊಲಂಬಿಯಾದ ಅತ್ಯಂತ ಮುಖ್ಯ ನದಿಗಳು. ಮ್ಯಾಗ್ಡಲೀನ ನದಿ ಬಾರಾಂಕೀಯಾದ ಬಳಿ ಕ್ಯಾರಿಬೀಯಾನ್ ಸಮುದ್ರವನ್ನು ಸೇರುತ್ತದೆ. ಇದರ ಉದ್ದ 956 ಮೈ. ಇದು ಹೆಚ್ಚು ಕಡಿಮೆ ಇಡೀ ದೇಶವನ್ನು ಹಾಯ್ದು ಹೋಗುತ್ತದೆ. ಇದರ ನೀರು ಅಲ್ಲಲ್ಲಿ ಹರಡಿ ಹೋಗುತ್ತದೆ. ನದಿಪಾತ್ರ ಸ್ಥಿರವಾಗಿಲ್ಲ. ಇದು ಸಮುದ್ರ ತಲಪಲು 200 ಮೈ. ಇರುವಾಗ ಕಾಕನದಿ ಇದನ್ನು ಕೂಡಿಕೊಳ್ಳುತ್ತದೆ. ಕಾಕನದಿ ಎರಡು ಕಡೆಗಳಲ್ಲಿ ನೌಕಾಯಾನಕ್ಕೆ ಅನುಕೂಲಕರ. ಕಾಕನದಿಯ ಉಪನದಿಗಳಲ್ಲಿ ರೀಯೂನೆಚಿ ಮುಖ್ಯವಾದ್ದು. ರೀಯೂ ಅಟ್ರಾಟೊ ಮತ್ತು ರೀಯೂ ಸಿನು ಉತ್ತರ ತೀರಕ್ಕೆ ಹರಿಯುತ್ತವೆ. ಇವುಗಳ ಮೇಲೆ ಸಣ್ಣ ಜಹಜುಗಳು ಸಂಚರಿಸಬಹುದು. ಪೆಸಿಫಿಕ್ ಸಾಗರ ಸೇರುವ ನದಿಗಳು ಅಸಂಖ್ಯಾತ. ಅವು ಬಲು ಸಣ್ಣ. ಅವುಗಳಲ್ಲಿ ಜಲಪಾತಗಳು ಹೆಚ್ಚು. ಪೂರ್ವ ಮೈದಾನದ ನದಿಗಳು ಓರಿನೋಕೋ ಮತ್ತು ಆಮೆಜಾóನ್ ನದಿಗಳನ್ನು ಸೇರುತ್ತವೆ. ಇವುಗಳಲ್ಲಿ ಕೆಲವು ನೌಕಾ ಸಂಚಾರಕ್ಕೆ ಅನುಕೂಲಕರ. 

ವಾಯುಗುಣ : ಕೊಲಂಬಿಯ ದೇಶ ಬಹುತೇಕ ಉತ್ತರ ಉಷ್ಣವಲಯದಲ್ಲಿದೆ. ಆದರೆ ಇಲ್ಲಿಯ ನೆಲದ ಬಹುಭಾಗ ಸಮುದ್ರಮಟ್ಟಕ್ಕಿಂತ ಬಲು ಎತ್ತರದಲ್ಲಿರುವುದರಿಂದಲೂ ಮಾರುತಗಳ ಪ್ರಭಾವದಿಂದಲೂ ಉಷ್ಣವಲಯದ ಬಿರುಸು ಕಡಿಮೆ. ತಗ್ಗಿನ ಪ್ರದೇಶಗಳಲ್ಲಿ-ಮುಖ್ಯವಾಗಿ ಕರಾವಳಿಗಳಲ್ಲಿ ಮತ್ತು ದೊಡ್ಡ ನದಿಗಳ ಬಯಲುಗಳಲ್ಲಿ-ಉಷ್ಣತೆ ಹೆಚ್ಚು. ಈ ಪ್ರದೇಶಗಳು ತೇವತುಂಬಿದ ವಾತಾವರಣದಿಂದಲೂ ದಟ್ಟವಾದ ಕಾಡುಗಳಿಂದಲೂ ಕೂಡಿದ್ದು, ಅನಾರೋಗ್ಯಕರವಾಗಿವೆ. ಉಷ್ಣವಲಯದ ಪ್ರದೇಶದಿಂದ ಉತ್ತರಕ್ಕೆ ಪರ್ವತಗಳ ಪ್ರದೇಶದ್ದು ಕಡಿಮೆ ಉಷ್ಣತೆಯ ವಾಯುಗುಣ. ತಂಪಿನಿಂದ ಅತ್ಯಂತ ಶೀತದವರೆಗೆ ವಿವಿಧ ವಾಯುಗುಣಗಳು ಇಲ್ಲುಂಟು. 1,500-6,000' ಎತ್ತರದ ಪ್ರದೇಶದ್ದು ಉಪೋಷ್ಣವಲಯದ ವಾಯುಗುಣ. ಇಲ್ಲಿಯದು ಫಲವತ್ತಾದ ನೆಲ. 6,000'-10,000' ಎತ್ತರದ ಪ್ರದೇಶದಲ್ಲಿ ಸಮಶೀತೋಷ್ಣವಾಯುಗುಣವಿದೆ. 10,000'-15,000' ಎತ್ತರದಲ್ಲಿ ಉಷ್ಣತೆ ಇನ್ನೂ ಕಡಿಮೆ. ಇದಕ್ಕೂ ಎತ್ತರದ ನೆಲ ಹಿಮದಿಂದ ಆವೃತವಾಗಿರುತ್ತದೆ. ಕೊಲಂಬಿಯದ ಮುಖ್ಯ ನಗರಗಳು ಬಹುತೇಕ 3,000'-9,000' ಎತ್ತರದ ಪ್ರದೇಶದಲ್ಲಿವೆ. 
ವರ್ಷವನ್ನು ಸ್ಥೂಲವಾಗಿ ತೇವದ ಕಾಲ ಅಥವಾ ಚಳಿಗಾಲ ಮತ್ತು ಶುಷ್ಕತೆಯ ಕಾಲ ಅಥವಾ ಬೇಸಿಗೆ ಕಾಲ ಎಂದು ವಿಂಗಡಿಸಲಾಗಿದೆ. ಕೆಲವು ಕಡೆಗಳಲ್ಲಿ ವರ್ಷಕ್ಕೆ ಎರಡು ಮಳೆಗಾಲಗಳೂ ಎರಡು ಒಣಹವೆ ಕಾಲಗಳೂ ಇರುವುದುಂಟು. ಇಡೀ ಕೊಲಂಬಿಯದಲ್ಲಿ-ಬಹುಶಃ ಇಡೀ ದಕ್ಷಿಣ ಅಮೆರಿಕದಲ್ಲಿ-ಅತ್ಯಂತ ಹೆಚ್ಚಿನ ಮಳೆ ಬೀಳುವುದು ಪೆಸಿಫಿಕ್ ಸಾಗರ ತೀರದಲ್ಲಿ ಸ್ಯಾನ್ ವಾನ್-ಅಟ್ರಾಟೊ ಬಳಿ. ಅಲ್ಲಿ ವರ್ಷವೆಲ್ಲ ಮಳೆ ಸುರಿಯುತ್ತಿರುತ್ತದೆ. ವಾರ್ಷಿಕ ಮಳೆಯ ಪರಿಮಾಣ 400" ಗೂ ಮಿಗಿಲು. ಆಂಡಗೋಯದಲ್ಲಿ 415" ಮಳೆಯಾಗುತ್ತದೆ. 

ಸಸ್ಯಗಳು : ಕೊಲಂಬಿಯದ ಸಸ್ಯಸಂಪತ್ತು ಸಮೃದ್ಧವೂ ವೈವಿಧ್ಯಮಯವೂ ಆಗಿದೆ. ದೇಶದ ಹೆಚ್ಚು ಭಾಗ ಅರಣ್ಯಾವೃತ. ವನಿಲ, ಕ್ವಿನೈನ್, ಇಪಿಕ್ಯಾಕ್, ಸಾರ್ಸಪರಿಲ, ಗೋಂದುಮರ, ಗುಗ್ಗುಲ, ರಬ್ಬರ್, ಚರ್ಮ ಹದ ಮಾಡಲು ಉಪಯುಕ್ತವಾದ ಮರಗಳು, ಬಣ್ಣಗಳ ಮರಗಳು, ಟಾಗ್ವ-ಮುಂತಾದ ಹಲವು ಉಪಯುಕ್ತ ಮರಗಳು ಬೆಳೆಯುತ್ತವೆ. ಅರಣ್ಯೋತ್ಪನ್ನಗಳನ್ನು ಇದುವರೆಗೂ ಹೆಚ್ಚು ಲಾಭಪ್ರದವಾಗಿ ಬಳಸಿಕೊಳ್ಳುತ್ತಿಲ್ಲ. 10,000' ಎತ್ತರದವರೆಗೂ ತಾಳೆ ಜಾತಿಯ ಮರಗಳು ವಿಶೇಷ. ಕ್ಯಾರಿಬೀಯನ್ ತೀರದಲ್ಲಿ ಕೋಕೊ ಮರಗಳಿವೆ. ಕಾಡುಗಳಲ್ಲಿ ಆರ್ಕಿಡ್‍ಗಳು ಧಾರಾಳವಾಗಿ ಬೆಳೆಯುತ್ತವೆ. ಅಮೆರಿಕನ್ ಬಿದಿರು-ಗ್ವಾಡ್ವ-ಇನ್ನೊಂದು ಮುಖ್ಯ ಸಸ್ಯ.

ಕೊಲಂಬಿಯದ ಸಸ್ಯಗಳು ನೆಲದ ಎತ್ತರಕ್ಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತವೆ. 1,500'-4,500' ಎತ್ತರದಲ್ಲಿರುವವು ಉಪೋಷ್ಣವಲಯದ ಕಾಡುಗಳು. 6,000' ಎತ್ತರದಿಂದ ಸಮಶೀತೋಷ್ಣವಲಯದ ಕಾಡುಗಳು ಪ್ರಾರಂಭವಾಗುತ್ತವೆ. ಈ ನೆಲ ಬೇಸಾಯಕ್ಕೆ ಅತ್ಯುತ್ತಮ. ಇಲ್ಲಿ ಧಾನ್ಯಗಳು, ತರಕಾರಿಗಳು, ಹಣ್ಣುಗಳು ಬೆಳೆಯುತ್ತವೆ. 10,000' ಇಂದ ಮೇಲಕ್ಕೆ ಇರುವ ಎತ್ತರದ ಬೋಳುನೆಲದ ಮೇಲೆ ಕುಬ್ಜ ಸಸ್ಯಗಳುಂಟು. ಇನ್ನೂ ಎತ್ತರದ ಪ್ರದೇಶದಲ್ಲಿ ಆಪ್ಫೈನ್ ಸಸ್ಯಗಳು ಮಾತ್ರ ಕಂಡುಬರುತ್ತವೆ. ಕೊಲಂಬಿಯದ ಸಾಗುವಾನಿ ವೈವಿಧ್ಯಪೂರಿತವಾದ್ದು. ಮಹಾಗನಿ, ಲಿಗ್ನಂ ವಿಟೇ, ಬ್ರಜಿûಲ್‍ವೂಡ್, ವಾಲ್ನಟ್, ಸಿಡಾರ್, ಓಕ್ ಮುಂತಾದ ಹಲವು ಜಾತಿಗಳು ಇಲ್ಲುಂಟು. ಆಸ್ಟ್ರೇಲಿಯದಿಂದ ತಂದು ಬೆಳೆಸಿದ ನೀಲಗಿರಿ ತೈಲದ ಮರ ಇನ್ನೊಂದು ಉಪಯುಕ್ತ ವೃಕ್ಷ. ಕಾಫಿ ಗಿಡಗಳಿಗೆ ನೆರಳು ಒದಗಿಸುವ ಸಲುವಾಗಿ ಇನ್ಗ, ಆಲ್ಬಿಜ್ಜ ಮುಂತಾದ ಮರಗಳನ್ನೂ ನಟ್ಟು ಬೆಳೆಸಲಾಗಿದೆ.

ಪ್ರಾಣಿಗಳು : ಕೊಲಂಬಿಯದಲ್ಲಿ ಉಷ್ಣವಲಯದ ಪ್ರಾಣಿಗಳಿಂದ ಶೀತವಲಯದವುಗಳವರೆಗೆ ನಾನಾ ತೆರನಾದ ಪ್ರಾಣಿಗಳಿವೆ. ಸ್ಲಾತ್, ಒಪೋಸಂ, ಕೋತಿಗಳು, ಟೇಪರ್, ಪೆಕರಿ, ಜಿಂಕೆ, ಮೊಲ ಮುಂತಾದವು ಉಷ್ಣವಲಯದ ಕಾಡುಗಳಲ್ಲಿವೆ. ಇವು ಸಸ್ಯಾಹಾರಿಗಳು. ಮಾಂಸಾಹಾರಿಗಳ ಪೈಕಿ ಮುಖ್ಯವಾದವು ಪ್ಯೂಮ, ಜಾಗ್ವರ್, ನರಿ ಮತ್ತು ರ್ಯಾಕೂನ್. ಇಲ್ಲಿ 1,500ಕ್ಕೂ ಹೆಚ್ಚಿನ ಜಾತಿ-ಉಪಜಾತಿಗಳ ಹಕ್ಕಿಗಳುಂಟು. ಉರಗಜಾತಿಯ ಪ್ರಾಣಿಗಳೂ ಹಲವಾರು ಇವೆ. ಹಲ್ಲಿ, ಹಾವು, ಮೊಸಳೆಗಳು ಹಲವು ತೆರ. ಉಭಯಜೀವಿಗಳ ಪೈಕಿ ಕೇಸಿಲಿಯನ್, ಬೆಂಕಿಮೊಸಳೆ, ಕಪ್ಪೆಗಳು ಮುಖ್ಯವಾದವು. ಹಲವು ಬಗೆಯ ಮೀನುಗಳೂ ಉಂಟು. ಇಲ್ಲಿರುವ ಬಗೆಬಗೆಯ ಕೀಟಗಳಲ್ಲಿ ಮುಖ್ಯವಾದವೆಂದರೆ ಮಲೇರಿಯ ಮತ್ತು ಹಳದಿ ಜ್ವರ ತರುವ ಸೊಳ್ಳೆಗಳು.

ಕೃಷಿ : ಕೊಲಂಬಿಯದ ಹೆಚ್ಚು ಜನ ಬೇಸಾಯ ಮತ್ತು ಪಶುಪಾಲನೆಗಳನ್ನೇ ಅವಲಂಬಿಸಿದ್ದಾರೆ. 3,000'-10,000' ಎತ್ತರದ ನೆಲ ವ್ಯವಸಾಯ ಪ್ರದೇಶ. ಸಾಗುವಳಿಯಾಗಬಹುದಾದ ನೆಲದಲ್ಲಿ ಎಷ್ಟೋ ಇನ್ನೂ ಕೃಷಿಗೆ ಒಳಪಟ್ಟಿಲ್ಲ. 3,000'-6,000' ಎತ್ತರದ ಸಮಶೀತೋಷ್ಣ ವಾಯುಗುಣದ ನೆಲದಲ್ಲಿ ಕಾಫಿ ಬೆಳೆಯುತ್ತದೆ. ಇದೇ ಈ ದೇಶದ ಮುಖ್ಯ ಬೆಳೆ. ಕೊಲಂಬಿಯದ ಕಾಫಿ ಸೌಮ್ಯ ಗುಣವುಳ್ಳದ್ದು. ಇದನ್ನು ಬ್ರಜಿóಲಿನ ಕಾಫಿಯೊಂದಿಗೂ ರೊಬಸ್ಟದೊಂದಿಗೂ ಬೆರಸುತ್ತಾರೆ. ಕೊಲಂಬಿಯದ ನಿರ್ಯಾತದಲ್ಲಿ ಮುಕ್ಕಾಲು ಭಾಗ ಕಾಫಿ. ರಬ್ಬರ್, ತೆಂಗು, ಹೊಗೆಸೊಪ್ಪು, ಬನಾನ, ಕಬ್ಬು, ಮೆಕ್ಕೆಜೋಳ, ಹತ್ತಿ, ಕೋಕೋ, ಬತ್ತ-ಇವು ಉಷ್ಣವಲಯದ ಬೆಳೆಗಳು. ಉಪೋಷ್ಣ ವಾಯುಗುಣದಲ್ಲಿ ಕಾಫಿಯಲ್ಲದೆ ಹಣ್ಣು, ಬನಾನ, ಪೈನಾಪಲ್, ಮಾವು, ಪರಂಗಿ, ಕಿತ್ತಳೆ ಮುಂತಾದವು ಬೆಳೆಯುತ್ತವೆ. ಸಮಶೀತೋಷ್ಣ ವಾಯುಗುಣ ಬೇಸಾಯಕ್ಕೆ ಅತ್ಯುತ್ತಮವಾದ್ದು. ಇಲ್ಲಿ ಗೋದಿ, ಬಾರ್ಲಿ, ಆಲೂಗೆಡ್ಡೆ, ಓಟ್ಸ್, ಕಾಳು, ಹಣ್ಣು ತರಕಾರಿ ಬೆಳೆಯುತ್ತಾರೆ. ಪಶುಪಾಲನೆಯೂ ವ್ಯಾಪಕವಾಗಿದೆ.

ಗಣಿಗಾರಿಕೆ : ಹಿಂದೆ ಚಿನ್ನ ಕೊಲಂಬಿಯದ ಮುಖ್ಯ ಖನಿಜವೆಂದು ಪರಿಗಣಿತವಾಗಿತ್ತು. ಈಗ ಪೆಟ್ರೋಲಿಯಂ ಆದ್ಯತೆ ಗಳಿಸಿದೆ. ಬೆಳ್ಳಿ ಇಲ್ಲಿ ಸಿಗುವ ಇನ್ನೊಂದು ಖನಿಜ. ಈಗ ತಿಳಿದಿರುವ ಮಟ್ಟಿಗೆ ಕೊಲಂಬಿಯವೇ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಪ್ಲಾಟಿನಂ ನಿಕ್ಷೇಪ ಇರುವ ದೇಶ. ಪಚ್ಚೆ ಇನ್ನೊಂದು ಮುಖ್ಯ ಖನಿಜ. ಇದರಲ್ಲಿ ಕೊಲಂಬಿಯಕ್ಕೆ ವಿಶ್ವದಲ್ಲಿ ಅಗ್ರಸ್ಥಾನವಿದೆ. ಮೆಕ್ಸಿಕೋ, ಬ್ರಜಿóಲ್‍ಗಳಲ್ಲಿ ಇರುವುದಕ್ಕಿಂತಲೂ ಅಧಿಕವಾಗಿ ಕಲ್ಲಿದ್ದಲ ನಿಕ್ಷೇಪ ಕೊಲಂಬಿಯದಲ್ಲಿದೆ. ಕಬ್ಬಿಣದ ಅದಿರನ್ನೂ ಅಧಿಕವಾಗಿ ತೆಗೆಯಲಾಗುತ್ತಿದೆ.

ಕೈಗಾರಿಕೆಗಳು : ಇಪ್ಪತ್ತನೆಯ ಶತಮಾನದಲ್ಲಿ ಕೊಲಂಬಿಯದ ಕೈಗಾರಿಕೆಗಳು ತಕ್ಕಮಟ್ಟಿಗೆ ಬೆಳೆದಿವೆ. ಜವಳಿ, ಪಾದರಕ್ಷೆ, ಸಿಮೆಂಟ್ ಮತ್ತು ಇತರ ಕಟ್ಟಡ ಸಾಮಗ್ರಿಗಳ ವಿಚಾರದಲ್ಲಿ ಕೊಲಂಬಿಯದ ಸ್ವಯಂಪೂರ್ಣವಾಗಿದೆ. ಬೋಗೊಟಾ, ಮೇದೆಯಿನ್, ಕಾಲಿ, ಬಾರಾಂಕೀಯಾ ಮುಖ್ಯ ಕೈಗಾರಿಕಾ ಕೇಂದ್ರಗಳು. ಪಾeóï ಡೆಲ್ ರೀಯೊದಲ್ಲಿ ಉಕ್ಕಿನ ಕಾರ್ಖಾನೆಯನ್ನು 1954ರಲ್ಲಿ ಸ್ಥಾಪಿಸಲಾಯಿತು. 

ಸಾರಿಗೆ : ಕೊಲಂಬಿಯದ ವ್ಯಾಪಾರ ಕೈಗಾರಿಕೆಗಳ ಬೆಳೆವಣಿಗೆಗೆ ಮುಖ್ಯ ಅಡಚಣೆಯೆಂದರೆ ಸಾರಿಗೆಯ ಸಮಸ್ಯೆ. ಕೊಲಂಬಿಯದ ಜನನಿಬಿಡ ಪ್ರದೇಶಗಳು ಇರುವುದು ಒಳನಾಡಿನಲ್ಲಿ. ಇದು ಪರ್ವತಶ್ರೇಣಿಗಳಿಂದಾಗಿ ಸಮುದ್ರತೀರದಿಂದ ಬೇರ್ಪಟ್ಟಿದೆ. ಕೊಲಂಬಿಯದ ರಾಜಧಾನಿಗೆ ಕೂಡ ಸಮರ್ಪಕ ಸಾರಿಗೆ ಸಂಪರ್ಕವಿಲ್ಲ. ವಿಮಾನ ಮಾರ್ಗಗಳಿಂದಾಗಿ ಪರಿಸ್ಥಿತಿ ಸ್ವಲ್ಪ ಉತ್ತಮ. ಒಳನಾಡಿನಿಂದ ತೀರಪ್ರದೇಶಕ್ಕಿರುವ ಮುಖ್ಯ ರೈಲ್ವೆ ಮತ್ತು ರಸ್ತೆಗಳು ಕಾಲಿ ಮತ್ತು ಬ್ವೇನಾವಂಟೂರಾಗಳ ಮೂಲಕ ಸಾಗುತ್ತವೆ. ಬಹುತೇಕ ರೈಲು ಮಾರ್ಗಗಳು ಮ್ಯಾಗ್ಡಲೀನ ನದಿಯಿಂದ ಒಳನಾಡಿಗೆ ಸಾಗುತ್ತವೆ. ಮ್ಯಾಗ್ಡಲೀನ ನದಿ ದೊಡ್ಡ ಹಡಗುಗಳ ಸಂಚಾರಕ್ಕೆ ಅನುಕೂಲವಾಗಿಲ್ಲ. ಮ್ಯಾಗ್ಡಲೀನದ ಮುಖದ ಬಳಿ ಇರುವ ಬಾರಾಂಕೀಯಾ ಕೊಲಂಬಿಯದ ಅತ್ಯಂತ ದೊಡ್ಡ ಬಂದರು. ಕಾರ್ಟಿಜೀನ, ಸಾಂತ, ಮಾರ್ತ, ಬ್ವೇನಾವಂಟೂರಾ ಇತರ ಬಂದರುಗಳು. ಕೊಲಂಬಿಯದ ಸಾರಿಗೆ ವ್ಯವಸ್ಥೆಯ ಒಂದು ವೈಶಿಷ್ಟ್ಯವೆಂದರೆ ಊಧ್ರ್ವ ಕೇಬಲ್‍ಗಳು (ಏರಿಯಲ್ ಕೇಬಲ್ಸ್). ಕೆಲವು ಕಡೆ ಇವುಗಳ ಸಹಾಯದಿಂದ ಸರಕನ್ನೂ ಪ್ರಯಾಣಿಕರನ್ನೂ ಸಾಗಿಸುತ್ತಾರೆ.

ಪಟ್ಟಣಗಳು, ನಾಣ್ಯ : ಕೊಲಂಬಿಯದ ರಾಜಧಾನಿ ಬೋಗೊಟಾ. ಜನಸಂಖ್ಯೆ 19,84,599 (1968ರ ಅಂದಾಜು), ಇತರ ಪಟ್ಟಣಗಳು ಇವು: ಮೇದೆಯೀನ್ (9,12,982), ಕಾಲಿ (7,71,981), ಬಾರಾಂಕೀಯಾ (5,90,262), ಕಾರ್ಟಜೀನ (2,85,077), ಬೂಕಾರಾಮಾಂಗಾ (2,64,913) ಮತ್ತು ಮ್ಯಾನಿeóÁಲೆಸ್(2,56,331).

ಕೊಲಂಬಿಯದ ನಾಣ್ಯ ಪೇಸೋ. ಇದನ್ನು 100 ಸೆಂಟಾವೋಗಳಾಗಿ ವಿಂಗಡಿಸಲಾಗಿದೆ.			*

ಜನಾಂಗ : ಇಲ್ಲಿಯ ಮೂಲನಿವಾಸಿಗಳು ಶಬೆಷಾ ಇಂಡಿಯನ್ನರು. ವ್ಯವಸಾಯಗಾರರಾಗಿದ್ದ ಅವರನ್ನು ಸ್ಪೇನ್ ದೇಶದ ಆಕ್ರಮಣಕಾರರು ಸುಲಭವಾಗಿ ಸೋಲಿಸಿ ಇಲ್ಲಿ ಬಂದು ನೆಲಸಿದರು. ಈಗ ಸೇಕಡ ಸು.,58ರಷ್ಟು ಜನ ಸ್ಪಾನಿಷ್ ಇಂಡಿಯನ್ ಜನಾಂಗಕ್ಕೆ ಸೇರಿದ ಮೆಜ್‍ಟಿಜೊಗಳು. ಮಿಕ್ಕವರು ಐರೋಪ್ಯ, ನೀಗ್ರೋ, ಮ್ಯಲೆಟ್ಟೋ, ಜಾಂಬೊ ಮತ್ತು ಇಂಡಿಯನ್ ಜನ. ಸೇಕಡ 90ರಷ್ಟು ಜನ ರೋಮನ್ ಕೆಥೊಲಿಕ್ ಪಂಥಕ್ಕೆ ಸೇರಿದವರು. ದೇಶಭಾಷೆ ಸ್ಪಾನಿಷ್.

ಆಡಳಿತ : 1886ರ ಸಂವಿಧಾನದ ಪ್ರಕಾರ ಕೊಲಂಬಿಯ ಗಣರಾಜ್ಯವಾಗಿ ಸ್ಥಾಪನೆಯಾಯಿತು. ಇಲ್ಲಿಯ ಸರ್ಕಾರ, ಅಮೆರಿಕ ಸಂಯುಕ್ತಸಂಸ್ಥಾನ ಸರ್ಕಾರದ ಮಾದರಿಯಲ್ಲಿ ರಚಿತವಾಗಿದೆ. ಅಧ್ಯಕ್ಷ ನಾಲ್ಕು ವರ್ಷಗಳಿಗೊಮ್ಮೆ ಆಯ್ಕೆ ಹೊಂದುತ್ತಾನೆ. 21ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಗೂ ಮತ ನೀಡುವ ಹಕ್ಕುಂಟು. ಕಾಂಗ್ರೆಸ್ಸು ಸೆನೆಟ್ ಮತ್ತು ಪ್ರತಿನಿಧಿ ಸಭೆಗಳೆಂಬ ದ್ವಿಸದನಗಳನ್ನೊಳಗೊಂಡಿದೆ. 1957ರ ಸಂವಿಧಾನ ತಿದ್ದುಪಡಿಯ ಪ್ರಕಾರ ದೇಶದಲ್ಲಿ ಅಸ್ತಿತ್ವದಲ್ಲಿರುವ ಸಂಪ್ರದಾಯವಾದಿ ಪಕ್ಷ ಮತ್ತು ಉದಾರವಾದಿ ಪಕ್ಷಗಳ ಪ್ರತಿನಿಧಿಗಳು 1974ರವರೆಗೂ ಸರದಿಯ ಪ್ರಕಾರ ಅಧ್ಯಕ್ಷ ಸ್ಥಾನ ಪಡೆಯಬೇಕು ಮತ್ತು ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಇತರ ಪೌರ ಸಂಸ್ಥೆಗಳಲ್ಲೂ ಸಮನಾದ ಪ್ರಾತಿನಿಧ್ಯ ಹೊಂದಿರಬೇಕು ಎಂದು ತೀರ್ಮಾನವಾಗಿತ್ತು. 1968ರಲ್ಲಿ ಸಂವಿಧಾನದಲ್ಲಿ ಅನೇಕ ಸುಧಾರಣೆಗಳನ್ನು ಮಾಡಲಾಯಿತು.

ಶಿಕ್ಷಣ, ಕಲೆ: ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಉಚಿತ. 7 ರಿಂದ 14 ವರ್ಷಗಳೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಯಲ್ಲಿದೆ. 15 ವರ್ಷಗಳಿಗೆ ಮೇಲ್ಪಟ್ಟ ವಿದ್ಯಾವಂತರ ಸಂಖ್ಯೆ ಸೇ.62.3 ಈ ರಾಷ್ಟ್ರದಲ್ಲಿ 50ಕ್ಕೂ ಮೇಲ್ಪಟ್ಟು ಪ್ರೌಢ ವಿದ್ಯಾಸಂಸ್ಥೆಗಳಿವೆ. 1572ರಲ್ಲಿ ಸ್ಥಾಪಿತವಾದ ಬೋಗೊಟಾ ರಾಷ್ಟ್ರೀಯ ವಿಶ್ವವಿದ್ಯಾಲಯ ಅತ್ಯಂತ ಹಳೆಯದು. 18 ರಿಂದ 30 ವರ್ಷಗಳೊಳಗಿನ ಯುವಕರೆಲ್ಲರೂ ಒಂದು ವರ್ಷ ಕಡ್ಡಾಯ ಸೈನಿಕ ಶಿಕ್ಷಣ ಪಡೆಯಬೇಕೆಂಬ ನಿಯಮವಿದೆ.
ಕೊಲಂಬಿಯ ದೇಶ ಕೆತ್ತನೆ ಕಲೆ, ಶಿಲ್ಪಕಲೆಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿಯ ಮೂಲನಿವಾಸಿಗಳು ಈ ಕಲೆಗಳಲ್ಲಿ ಮತ್ತು ಚಿನ್ನ ಬೆಳ್ಳಿಯ ಆಭರಣಗಳನ್ನು ಮಾಡುವುದರಲ್ಲಿ ಬಹು ಕುಶಲರಾಗಿದ್ದಾರೆ. ಇಲ್ಲಿ ನೆಲಸಿದ ಸ್ಪೇನ್ ಜನ ಅವರ ಕೌಶಲದಿಂದ ಬಹುಮಟ್ಟಿಗೆ ಪ್ರಭಾವಿತರಾಗಿದ್ದಾರೆ. ಕೊಲಂಬಿಯ ದೇಶ ತನ್ನ ಕವಿಗಳು, ಗ್ರಂಥಕರ್ತರು, ಪತ್ರಿಕೋದ್ಯಮಿಗಳ ಮೂಲಕವೂ ಸಾಂಸ್ಕøತಿಕ ಪ್ರಪಂಚಕ್ಕೆ ಕಾಣಿಕೆ ಸಲ್ಲಿಸಿದೆ.						(ಐ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ